ಮಾಯ್ಸನ ಊಂಕಾಟ

Entries tagged as ‘ಕನ್ನಡ’

’ಅಂಬಾರಿ’ಯಲ್ಲಿ ಬಂಡಾಯದ ಬೆದಂಡೆ ಹಾಡಿದ ’ಜಂಗ್ಲಿ’

February 11, 2009 · 12 Comments

ಮಾಯ್ಸನಿಂದ ಮೊದಲಿಗೆ ಸಕಳ ಪಬ್ಬಿಗರಿಗೆ, ರಸಿಕ ಕಬ್ಬಿಗರಿಗೂ ವ್ಯಾಲೆಂಟಯ್ನನ ದಿನದ ಶುಭಾಶಯಗಳು.

ಕುಡಿದು, ಕುಣಿದು, ಪ್ರೀತಿಗೆ ಪ್ರೀತಿಯ ಬೆಸೆದು, ಸಂತೋಷವಾಗಿ ಒಲುಮೆಗರೆದು, ಜೀವನದ ಉನ್ಮಾದದಲ್ಲಿ ತೇಲಾಡೋಣ. ಕಟ್ಟುಪಾಡುಗಳ  ಗಟ್ಟಿ ಕೋಟೆಗಳನ್ನು ‘ಮುತ್ತಿಗೆ’ ಹಾಕಿ, ಕುಟ್ಟಿ ಕೆಡುವಿ, ಚೆಂಗುಲಾಬಿಯ ಓಪನ್ ತೋಟವನ್ನು ರಚಿಸಿ ರಮಿಸೋಣ. ಆಹಾ! ಸ್ವರ್ಗ ಅಂದರೇ ಇಲ್ಲೇ, ಪ್ರೀತಿಯ ಸಾಂಗತ್ಯದಲ್ಲಿ…..

ಏನೆಲ್ಲ ನಡೆದು ಹೋಗಿದೆ ಮಾಯ್ಸನ ಕನ್ನಡ ನಾಡಲ್ಲಿ… ಮಾಯ್ಸನಿತ್ತ ನಿಶ್ಚಿಂತ ನೆಮ್ಮದಿಯಾಗಿ ಅಮೆರಿಕದ ಚಳಿ ಹವೆಯಲ್ಲಿ ತಲ್ಲೀನ.  ಪೇಪರ್‍ ಓದನು. ತಲೆಗೆ ಹುಳುವಾಗುವ ಸಂಗತಿಯಿಂದ ದೂರ. ಅನಿವಾಸಿಯವರ ಕೆಲವು ಬರಹಗಳನ್ನು ಕೆಂಡಸಂಪಿಗೆಯಲ್ಲಿ, ಬ್ಲಾಗಲ್ಲಿ ಬಿಟ್ಟು ಮತ್ತೆ ಯಾವುದಕ್ಕೂ ತಲೆ ಹಾಕಿರಲಿಲ್ಲ.

ಹೀಗೆ ಅವನ ನೆಲದಲ್ಲಿ ಇಂದು ಏನೇನೇನಾಗಿದೆ ಎಂದು ನೋಡಿದಾಗ, ನೋಡಿ ಊಂಕಿದಾಗ, ಎದ್ದೆದ್ದು ಕಂಡಿದ್ದು ಸುಂದರಿಯರ ಮಂಗಳೂರಿನ ಪಬ್ ಅಲ್ಲಿ (ರಮ್)ಲಲನೆಯರ ಮೇಲೆ ಶ್ರೀರಾಮಸೇನಿಕರ ದಾಳಿಯೆಂಬ ಅಮಂಗಳ ಘಟನೆಯ ಸುತ್ತ ಎಳೆದಾಟ, ಕಚ್ಚಾಟ, ಸರಕಾರದ ಪಿಕಲಾಟ. ಈ ಎಲ್ಲ ಜಂಜಾಟದ ನಡುವೆ ಪ್ರೀತಿಯ ದಿನವಾದ ವ್ಯಾಲಂಟಯ್ನನ ದಿನ ವಕ್ಕಿರಿಸಿಕೊಳ್ಳುತ್ತಿದೆ.  ಚಿತ್ರದುರ್ಗದ  ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷ ಬಸವರಾಜು ಅವರ ಬಂಡಾಯದ ಬೆದಂಡೆಯ ಘೋಷವಂತೆ. ಆಮೇಲೆ ಸಕ್ಕತ್ತಾಗಿ ಇರೋ ಹಾಡುಗಳ ಅಂಬಾರಿ ಮತ್ತು ಜಂಗ್ಲಿ ಕನ್ನಡ ಸಿನಿಮಗಳಂತೆ.

ಒಂದೊಂದಾಗಿ ಸಾವಧಾನದಿಂದ ಮುಂದೆ ಹೋಗೋಣ. ಕಾಳಿದಾಸನ ಮೇಘದೂತದ ಮಂದಕಮಾಲಾವೃತ್ತದ ಹಾಗೆ.

ಪಬ್ ಪುರಾಣ ರೋಚಕ ಕವಲುಗಳನ್ನು ಪಡೆದು ಉದ್ದವಾಗ್ತ ಸಕ್ಕತ್ entertaining ಆಗಿದೆ ಮಜವಾಗಿದೆ. ಈ ಟೀವಿ ಚಾನಲ್ಲು, ಪೇಪರ್‍ರು, ಆ ಮಂತ್ರಿಣಿ, ಈ ರಾಮಸೇನೆಯವರು, ಆ ಪಿಂಕ್ ಚಡ್ಡಿಯ ಆಂದೋಳನ. ಹೆ ಹೆ ಸಕ್ಕತ್ Funny.

ರಾಮಸೇನೆಯವರು ವ್ಯಾಲೆಂಟಯ್ನಸ್ ಡೇ ದಿನ, ಹುಡುಗ-ಹುಡುಗಿ ಜತೆಗೆ  ಕಂಡರೆ, ಅಲ್ಲಿ ಪೂಜಾರಿ, ವಾಲಗದ ಸಮೇತ ವಿವಾಹಕಾರ್ಯ ಮಾಡುವ ಬೆದರಿಕೆ ಹಾಕಿದ್ದಾರೆ. ಅಯ್ಯೋ ‘ಮದುವೆ’ ಎಂಬ ಮಧುರ ಸಂಬಂಧವನ್ನು ಹೆದರಿಸಿಲು ಬಳಸುವುದು ಇಂಡಿಯದಲ್ಲೇ ಇರಬೇಕು. ಅಲ್ಲಯ್ಯ ಮದುವೆ ಅನ್ನೋದು ತಾಳಿ ಕಟ್ಟಿದ್ರೆ, ವಾಲಗ ಊದಿ, ಡೊಳ್ಳು ಬಡೆದ್ರೆ ಆಗತ್ಯೆ? ಅಲ್ಲಿ ಪ್ರೀತಿ, ಪ್ರೇಮ, ಆರ್ಕಷಣೆ, ವಿಶ್ವಾಸ, ಹೊಂದಾಣಿಕೆ ಇರಬೇಕಲ್ವ? ಎಂಬ ಪ್ರಗತಿಪರರು, ಚಿಂತಕರು, ಜ್ಯಾತ್ಯಾತೀತರು, ಬುದ್ಧಜೀವಿ ಎಂಬ ಬಿರುದಾಂಕಿತರು ಪ್ರಶ್ನೆಗಳನ್ನು ಕೇಳುವ ಹಾಗೇ ಇಲ್ಲ. ಯಾಕೆ ಅಂದ್ರೆ ’ಹಾಗೆ ಮದುವೆಯಾಗೋದು, ಲವ್ ಮಾಡೋದು ನಮ್ಮ ಇಂಡಿಯದ ಸಂಸ್ಕೃತಿಯಲ್ಲ’ ಎಂದು ಇಲ್ಲೇ ದಡುಂ ಎಂದು   ಕಮೆಂಟು ಹಾಕಿ, ಸಿದ್ಧ-ಉತ್ತರ ಕೊಡುವರು. ಇನ್ನು ಆ ಮಂದಿಗೆ ಇದನ್ನೆಲ್ಲ ಬಿಡಿಸಿ ಹೇಳೊ ಕೆಲಸ ಮಾಡಲು ಹೋಗಿ ಮುನಿಸು ಇರುಸುಮುರುಸು ಕೋಪತಾಪ ಅವೆಲ್ಲ ಯಾಕೆ. ಕುಳಿಕುಳಿ ಕುಳಿರಾಗಿರೋಣ.

ಬಿಡುಗಡೆ

ಅದರಲ್ಲೂ ಪಿಂಕ್ ಚಡ್ಡಿಗಳನ್ನು ಕಳಿಸುವ ಐಡಿಯ ಅದು ಹೇಗೆ ಬಂತೋ. ಅಂತೂ ಮಜವಾಗಿದೆ.  ಅದ್ಯಾವ ಯಾವ ಡಿಸೈನ್, ಸೈಜಿನ ಹೆಂಗಸರ ಚಡ್ಡಿಗಳನ್ನು ಕಳಿಸುವರೋ ರಾಮ ರಾಮ.!  ಅದರ ವಿಡಿಯೋ ಸಿಕ್ಕರೆ ಯೂಟ್ಯೂಬಲ್ಲಿ ಹಾಕಿ ಮಾಯ್ಸಂಗೆ ತೋರಿಸಿರಿ.

ಈ ಪಿಂಕ್ ಚಡ್ಡಿ ಆಂದೋಳನ, ’ಪಬ್ ಬರೋ’ ಚಳುವಳಿ ಇವೆಲ್ಲ ಇಂಡಿಯದಲ್ಲಿ ಅತಿಯೆಂದು ಕಾಣಿಸಬಹುದು. ಮಾಯ್ಸನೂ ಒಪ್ತಾನೆ. ಆದರೆ ಹೀಗೆ ಹೆಂಗಸರು ಪ್ರತಿಭಟಿಸಿದ ದೇಶಗಳೆಲ್ಲ ಇಂದು ಮುಂದುವರಿದ ದೇಶಗಳಂತೆ. ಇಂಗ್ಲೇಂಡಲ್ಲಿ ಹಿಂದೆ ಹೆಂಗಸರಿಗೆ ಪಬ್ಲಿಕ್ ಕಕ್ಕಸುಗಳು ಇರಲಿಲ್ಲವಂತೆ.  ಸರಕಾರಕ್ಕೆ ಎಷ್ಟು ಕೋರಿದರೂ ಅವರು ಕಟ್ಟಲಿಲ್ಲವಂತೆ. ಆಗ ಅಲ್ಲಿನ ಧೀರ ವನಿತೆಯರು, ಗಂಡಸರ ಕಕ್ಕಸಿನಲ್ಲೇನೇ ಹೋಗಲು ಸುರು ಮಾಡಿದರಂತೆ. ಆಗ ಗಂಡಸರು ಹೋಗಿ ಸರಕಾರಕ್ಕೆ ’ಈ ಹೆಣ್ಣುಗಳು ನಮ್ಮ ಕಕ್ಕಸಿಗೆ ನುಸುಳಿ ಅರ್ಧ ಅರ್ಧ ಗಂಟೆ ಬಾಗಿಲು ಹಾಕ್ಕೊಂಡು ಹೊರಗೆ ಬರೊಲ್ಲ. ನಮಗೆ ಆಚೆ ಅರ್‍ಜೆಂಟು ತಡೆಯೋದು ಶ್ಯಾನೆ ಕಷ್ಟ. ಆ ಗಂಡ್ ಬೀರೀರ್‍ಗೆ ಮೊದಲು ನಾಲಕ್ಕು ಕಕ್ಕಸ್ ಕಟ್ಸಿ’ ಎಂದು ಗದರಿಸಿದ ಮೇಲೇನೇಯ ಸರಕಾರ ಹೆಂಗಸರಿಗೆ ಶೌಚಾಲಯಗಳನ್ನು ಪಬ್ಲಿಕಲ್ಲಿ ಕಟ್ತಂತೆ.  ಇಂಗ್ಲೆಂಡಿನ ಹೆಣ್ಣುಗಳ ’ಕಕ್ಕಸು ಚಳುವಳಿ’ ಅಲ್ಲಿ, ಮತ್ತು ಯುರೋಪಿನ ಹಲದೇಶದ ಹೆಣ್ಣುಗಳಿಗೆ confidence ತಂತಂತೆ.  ಅದೊಂದು ’ಹೆಣ್ಣುಗಳ ಹಕ್ಕುಗಳ’ ಬಗ್ಗೆಯ ಹೋರಾಟದ ಮೈಲುಗಲ್ಲಂತೆ. ಅದೆಷ್ಟು ದಿಟವೋ, ಉಷ್ಟು ಹುಸಿಯೋ.. ರಾಮ ರಾಮ…. ಹಾಳು ಪಾಶ್ಚಿಮಾತ್ಯ ಸಂಸ್ಕೃತಿ…

ಶಕುಂತಲೆ ದುಶ್ಯಂತ

ಶಕುಂತಲೆ ದುಶ್ಯಂತ

ಕಾಳಿದಾಸನ ಮೇಘದೂತವನ್ನು ಮಾಯ್ಸ ಪೂರ್‍ತಿ ಓದಲೇ ಇಲ್ಲ. ಆದರೂ ಓದಿದಷ್ಟನ್ನು ಆಸ್ವಾದಿಸಿ ಕಾಳಿದಾಸನ ದಾಸ(ಕಾಳಿದಾಸದಾಸ)ನೆಂದು ಹೇಳಿಕೊಳ್ಳುವನೇನೋ. ಕಾಳಿದಾಸನ ಮೇಘದೂತದಲ್ಲಿ ಕಾಂತಾವಿರಹಗುರುವಿನಿಂದ ಆ ಯಕ್ಷನು ಮೋಡದಿಂದ ಸಂದೇಶಗಳನ್ನು ಕಳಿಸುವನು. ಅಷ್ಟೇ ಅಲ್ಲ ಮೋಡವು ಮಾರ್ಗದಲ್ಲಿ ಎಂತೆಂತ ಸುಂದರ ಹೆಣ್ಣುಗಳನ್ನು, ಆ ಹೆಣ್ಣುಗಳ ಸುಂದರ ಅಂಗಗಳನ್ನು, ಕಣ್ಣೋಟವನ್ನು, ಎದೆಯುಬ್ಬುಗೆಯನ್ನು, ಸೊಂಟದ ಬಳುಕನ್ನು, ನುಣುಪು ಚರ್ಮದ ಕಾಂತಿಯನ್ನು, ಅವರ ಕಾಮದ ಆಟಗಳನ್ನು, ಆಹಾ ಅದೆಷ್ಟು ಚನ್ನಾಗಿ ಬಣ್ಣಿಸಿದ್ದಾನೆ.  ಕಾಳಿದಾಸನೊಬ್ಬ ಪ್ರೇಮಕವಿ, ಪ್ರಣಯಕವಿ. ಇನ್ನು ಅಭಿಜ್ಞಾನ ಶಾಕುಂತಲೆ ನಾಟಕದಲ್ಲಂತೂ, ಶಕುಂತಲೆ ಮತ್ತು ದುಶ್ಯಂತರ ಆರ್ಕಷಣೆಯ ವರ್ಣನೆ, ಶಕುಂತಲೆಯ ಬಿಗಿರವಿಕೆಯ ಬಿಗುವಿನ ಸನ್ನಿವೇಶ ಅಬ್ಬ! ಸಂಸ್ಕೃತದಲ್ಲಿ ಕಾವ್ಯವೋದಿದವರೆಲ್ಲ ಖಂಡಿತ ಈ ಪ್ರೇಮಿಗಳ ದಿನವಾದ ವ್ಯಾಲೆಂಟಯ್ನನ ದಿನವನ್ನು ಪ್ರೇಮಕ್ಕೆ ಪ್ರೀತಿಗೆ ಮುಡುಪಿಟ್ಟು, ಉಲ್ಲಾಸವಾಗಿರಲೇ ಬೇಕು.

ಇನ್ನೂ ಸಂಸ್ಕೃತದಲ್ಲಿ ಪ್ರೇಮೋನ್ಮಾದದ ಮೃಚ್ಛಕಟಿಕೆಯಲ್ಲಿ ವಸಂತಸೇನೆ ಆಚರಿಸಿದ ವಸಂತೋತ್ಸವದ ಪಬ್ಲಿಕ್ ಪ್ರೇಮದಾಟ. ಸ್ವಪ್ನವಾಸವದತ್ತೆಯಲ್ಲಿ ವಾಸವದತ್ತೆ ಮತ್ತು ವತ್ಸರಾಜರ ಕನಸಿನ ಸರಸ. ಮಾಳವಿಕಾಗ್ನಿಮಿತ್ರದಲ್ಲಿ ಮಾಳವಿಕಾ ಮತ್ತು ಅಗ್ನಿಮಿತ್ರರ ಒಲುಮೆ… ಅಬ್ಬಬ್ಬ ಎಂತಹ ಲವ್ ಸ್ಟೋರಿಗಳು…..  ಎಷ್ಟೇ ಆದರೂ ಶೃಂಗಾರವನ್ನು ಅಕ್ಷರಗಳಲ್ಲಿ ಬರೆದ, ಕಲ್ಲಿನಲ್ಲಿ ಕತ್ತಿದ, ಸುಂದರಾಂಗಾಂಗನೆಯರು   ನಾಟ್ಯದಲ್ಲಿ ಕುಣಿದುಕ್ಕಿಸಿದ, ಶೃಂಗಾರದ ಮೆಣ್ಣಲ್ಲವೇ ನಮ್ಮ ಶಕುಂತಲೆಯ ಮಗನಾದ ಭರತನ ಭೂಮಿ..!!

ಕನ್ನಡ ಸಾಹಿತ್ಯ ಅಷ್ಟು ರಸರಸವಾಗಿಲ್ಲ ಎಂದೇ ಹೇಳಬೇಕೇನೋ…. ಶೃಂಗಾರದಲ್ಲಿ ಸಂಸ್ಕೃತಕ್ಕೆ ಸಮವಲ್ಲ ಕನ್ನಡ.. ಅದೆಷ್ಟು ತೆರೆದ ಕಾಮನೆಗಳ ಬಿರಿದ ಪ್ರೇಮ ಕಾವ್ಯಪುಷ್ಪಗಳನ್ನು ಅಲರಿಸಿದ ಮಲರಿಸಿದ ರಸಿಕ ಭಾಷೆಯದು, ಸಂಸ್ಕೃತಭಾಷೆ.

ಈ ವ್ಯಾಲೆಂಟಯ್ನಸ್ ಡೇ ದಿನ ಮಾಯ್ಸ ಮೇಘದೂತದ, ಭರ್ತೃಹರಿಯ ಶೃಂಗಾರ ಶತಕದ, ಹತ್ತು ಹತ್ತು ಶೃಂಗಾರ ಶ್ಲೋಕಗಳನ್ನು ಓದಿ, ರಸಿಕತೆಯನ್ನು ಅನುಭವಿಸಿ, ಸಕಲ ರಸಿಕ ಕಬ್ಬಗರಿಗೆ ವಂದಿಸುವನು.

ಕನ್ನಡ ದೇಶ

ಚಾಲುಕ್ಯರ ಕನ್ನಡ ದೇಶ

ಇನ್ನೂ ಬಂಡಾಯದ ಬೆದಂಡೆಯ ಕನ್ನಡ ಸಾಹಿತ್ಯ ಸಮ್ಮೇಳನ. ಸಮ್ಮೇಳನಾಧ್ಯಕ್ಷರ ಮುಖ್ಯಭಾಷಣವನ್ನು ಓದಿದನು. ಬೆದಂಡೆಗಬ್ಬದ ಬಗ್ಗೆ ಸಾಕಷ್ಟು ವಿದ್ವತ್ ವಿಚಾರಗಳನ್ನು ತಿಳಿಸಿದ್ದಾರೆ. ಹಾಗೆ

ಆ ಮಾರ್ಗ ಮತ್ತು ದೇಶೀ ಮಿಶ್ರವಾದ ಕನ್ನಡ ವಿದ್ವತ್ ಪ್ರಕಾರದವೇ ಆಗಿವೆ. ಅವನ್ನು ರಾಜಾಸ್ಥಾನದಲ್ಲಿ ಮತ್ತು ವಿದ್ವತ್ ಗೋಷ್ಠಿಗಳಲ್ಲಿ ಪಂಡಿತರು ಮಾತ್ರವೇ ಓದಲು ಅಥವಾ ಓದಿ ಹೇಳಲು ಸಾಧ್ಯವಿತ್ತು – ಅಂದರೆ ಅವು ಜನಸಾಮಾನ್ಯರ ಮತ್ತು ನತದೃಷ್ಟ ದಲಿತರ ಸರಳ ವಲಯದಿಂದ ದೂರವೇ ಉಳಿದಿದ್ದವು.
ಇಷ್ಟೆಲ್ಲ ಸಾರಸ್ವತನಷ್ಟವಾದಾಗಲೂ ಕನ್ನಡ ಜನಸಾಮಾನ್ಯರು – ಅದರಲ್ಲೂ ಮುಖ್ಯವಾಗಿ ದಲಿತ ಜನ ತಲೆಯ ಮೇಲೆ ಕೈಹೊತ್ತು ಕುಳಿತುಕೊಳ್ಳುವ ದುರದೃಷ್ಟದ ಪ್ರಮೇಯವಿರಲಿಲ್ಲ! ಯಾಕೆಂದರೆ – ಆ ಜನಸಾಮಾನ್ಯರಿಗೆ ಮತ್ತು ದಲಿತರಿಗೆ – “ಬೆದಂಡೆ” ಎಂಬ ಒಂದು ದೇಸೀ ಕಾವ್ಯಪ್ರಕಾರವು – ಆತ್ಮೀಯವಾಗಿ ಒಗ್ಗಿ ಬಂದಿತ್ತು.

ಬೆದಂಡೆಯೆಂಬುದು ನೆಲಗಬ್ಬ, ದೇಸಿಗಬ್ಬ. ಇದನ್ನು ಅಪ್ಪಟ ಕನ್ನಡಿಗರು, ವಿದ್ವತ್ ಎಂಬ ಹೊರೆಯ ತೂಕದಿಂದ ಕಬ್ಬವನ್ನು ಕುಗ್ಗಿಸದೇ, ಬರೀ ಹಾಡಿ, ಕುಣಿದು, ನಲಿದು ಸವಿಯಲು, ತಕ್ಕಮಟ್ಟಿನ ಅರ್ಥ ಹುದುಗಿಸಿದ ಕಾವ್ಯಪ್ರಕಾರ.  ಈ ಕನ್ನಡನಾಡಿನಲ್ಲಿ ಕಾವ್ಯ ಎಂದರೆ ಮಾಯ್ಸನ ಹಾಗೆ ಕಾಳಿದಾಸ, ಭಾಸ ಎಂದು ಸಂಸ್ಕೃತದ ಕವಿಗಳ ಹೆಸರುಗಳ ಬೊಂಬಡಾ ಭಜಾಯಿಸುವವರೇ ಹೆಚ್ಚು. ದಿಟವಾಗಲೂ ನಮ್ಮ ದೇಸಿ ಕಾವ್ಯಬಗೆಗಳಾದ ಚಿತ್ತಾಣ, ಬೆದಂಡೆ ಮುಂತಾದ ಪ್ರಕಾರಗಳ ಬಗ್ಗೆ ಯಾರಿಗಾದರೂ ಆಸಕ್ತಿ ಇದೆಯಾ? ಕರ್‍ನಾಟಕ ಸರಕಾರ ಸಂಸ್ಕೃತ ವಿಶ್ವವಿದ್ಯಾನಿಲಯವನ್ನು ತೆರೆಯುವುದಂತೆ. ಆದರೆ ನಮ್ಮ ಕನ್ನಡದ ಕವಿರಾಜಮಾರ್ಗ,  ಕುಮುದೇಂದುವಿನ ಸಿರಿಭೂವಲಯ ಎಂಬ ಹಿರಿ ಚಕ್ರಕಾವ್ಯ ಮುಂತಾದ ಕನ್ನಡ ಸಾಹಿತ್ಯದ ಅಧ್ಯಯನಕ್ಕೆ ಎಷ್ಟು ಒತ್ತು ಕನ್ನಡಿಗರಿಂದ? ಏನೊಪ್ಪ. ಹಲವು ಸಂಸ್ಕೃತ ಭರಿತ ಕಾವ್ಯದ ಕವಿಗಳು, ಸಂಸ್ಕೃತ ಪಂಡಿತರು ’ಕನ್ನಡ’ ಸಮ್ಮೇಳನಾಧ್ಯಕ್ಷರಾಗಿದ್ದರು. ಈ ಸರತಿ ಹಳಗನ್ನಡದಲ್ಲಿ ದೇಸಿತನವನ್ನು, ಕನ್ನಡತನವನ್ನು, ಮಣ್ಣಿನ ಕಂಪಿನ ಜಾಡು ಹಿಡಿಯುವ ಆರಯ್ಯುಗಾರರನ್ನು ಕಂಡು ಕನ್ನಡಿಗ ಮಾಯ್ಸನಿಗೆ ಹೆಮ್ಮೆಯಾಗಿ ಇನ್ನು ಮುಂದಾದರೂ ಬರೀ ಕಾಳಿದಾಸನ ಹೆಸರು ಹೇಳದೇ, ಇನ್ನೂ ಹೆಚ್ಚು ಕನ್ನಡದ ಶೃಂಗಾರ ಸಾಹಿತ್ಯವನ್ನು ಓದಿ, ಮೊದಲು ಕನ್ನಡದ ಹಿರಿಗಬ್ಬಿಗರ ಹೆಸರು ಹೇಳಿ, ತರುವಾಯ ಟೈಮಿದ್ದರೆ ಕಾಳಿದಾಸ ಮುಂತಾದವರ ಹೆಸರು ಹೇಳುವ ನೆಟ್ಟಗಿನ ಬುದ್ದಿ ಕಲಿಯಬೇಕು.

ಈ ದೇಸಿಗಬ್ಬ, ಬೆದಂಡೆಯ ಮಾತು ಬಂದಾಗ ಅಂತಹ ಜನಪದ ಪ್ರಕಾರಗಳು ಇಂದು ಸತ್ತು ಹೋಗಿವೆ. ಆಡುನುಡಿಯ ಜನಪದ ಸಾಹಿತ್ಯದಲ್ಲಿರುವ ಲವಲವಿಕೆ, ಅರ್ಥಭರಿತ ವಿದ್ವತ್ಕಾವ್ಯಕ್ಕೆ ಇರುವುದೇ?  ಹಾಗಾದರೆ ಕನ್ನಡದ ಜನ ಹಾಡುಕಟ್ಟುವುದನ್ನು, ಆಡುಮಾತಿನಲ್ಲಿ ತಮ್ಮ ಭಾವನೆಗಳನ್ನು ಹೇಳಿಕೊಳ್ಳುವುದನ್ನು ಬಿಟ್ಟುಬಿಟ್ಟಿದ್ದಾರ? ಇಲ್ಲವೇ ಇಲ್ಲ. ಈ ಜಂಗ್ಲಿ, ಅಂಬಾರಿ ಸಿನಿಮಗಳ ಹಾಡುಗಳು ಸಕ್ಕತ್ ಬೆದಂಡೆಗಳೇ!”ಹಳೆ ಪಾತ್ರೆ, ಹಳೆ ಕಬ್ಣ.. “, “ಪೌಡ್ರಾಕ್ಕೊಳ್ಳೋ”, ’ಎಲೆ ಕೆಂಚಿ ತಾರೆ” ಅಬ್ಬಬ್ಬ..  ಮೊನ್ನೆ ವೀಕೆಂಡು ಈ ಹಾಡುಗಳನ್ನು ಹಾಕಿ ಮಾಯ್ಸ ತನ್ನ ತೆಲುಗು ಗೆಳೆಯರ ಜತೆ ಕುಣಿದು ಎನ್ಜಾಯ್ ಮಾಡ್ಲಿಲ್ವೇ!

ಆ ಹಾಡುಗಳನ್ನ ಇಲ್ಲಿ ನೋಡಿರಿ

ಒಲುಮೆಯ ಗುಲಾಬಿ ನನ್ನ ಒಲವಿಗೆ

ಒಲುಮೆಯ ಗುಲಾಬಿ

ಒಲುಮೆಯ ಗುಲಾಬಿ

Categories: ಇಂಡಿಯ · ಕನ್ನಡ · ಸಂಸ್ಕೃತಿ · ಸಾಹಿತ್ಯ · ಸಿನಿಮ
Tagged: , , ,